[t4b-ticker]
ಕ್ರೀಡೆ

ಜುಲೈ 6ಕ್ಕೆ ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆ

ಭಾರತೀಯ ಕುಸ್ತಿ ಒಕ್ಕೂಟಕ್ಕೆ ಜುಲೈ 6ರಂದು ಚುನಾವಣೆ ನಡೆಯಲಿದೆ ಎಂದು ಮಂಗಳವಾರ ಚುನಾವಣಾಧಿಕಾರಿ ಅಧಿಸೂಚನೆ ಪ್ರಕಟಿಸಿದ್ದಾರೆ. ಚುನಾವಣೆ ನಡೆದ ಸಂಜೆಯೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಭಾರತೀಯ ಒಲಿಂಪಿಕ್‌ ಸಂಸ್ಥೆಯು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಹೇಶ್‌ ಮಿತ್ತಲ್‌ ಕುಮಾರ್‌ ಅವರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ನಾಮಪತ್ರ ಸಲ್ಲಿಸಬಹುದಾಗಿದ್ದು, ಪ್ರತಿಯೊಬ್ಬ ಪ್ರತಿನಿಧಿಗೂ ಒಂದು ಮತ ಇರುತ್ತದೆ. ಪ್ರತಿ ಘಟಕದಿಂದ ಎರಡು ಉಮೇದುವಾರಿಕೆ ಸ್ವೀಕರಿಸಲು ಜೂನ್‌ 19 ಕೊನೆಯ ದಿನವಾಗಿದ್ದು, ಜೂನ್‌ 22ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಚುನಾವಣೆಯು ಜಲೈ 6ರಂದು ಬೆಳಿಗ್ಗೆ 11ರಿಂದ 1.20ರವರೆಗೆ ನಡೆಯಲಿದೆ. ಮತ ಎಣಿಕೆಯು ಮಧ್ಯಾಹ್ನ 1.30ರ ಬಳಿಕ ಆರಂಭವಾಗಲಿದೆ.

ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮಿತ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಯಾವೊಬ್ಬ ಕುಟುಂಬ ಸದಸ್ಯರೂ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲಾಗುವುದು ಎಂದು ಕ್ರೀಡಾ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಅವರು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಈಚೆಗೆ ವಾಗ್ದಾನ ನೀಡಿದ್ದರು. ಜೂನ್‌ 15ರೊಳಗೆ ಬ್ರಿಜ್‌ ಭೂಷಣ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂಬ ಠಾಕೂರ್‌ ಭರವಸೆ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಪ್ರತಿಭಟನೆಯನ್ನು ತಡೆ ಹಿಡಿದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button