[t4b-ticker]
ರಾಜ್ಯ

ಕಾಂಗ್ರೆಸ್‌ ನಾಯಕರ ಹೇಳಿಕೆ ಅಸಹಿಷ್ಣು ಭಾವನೆಯಿಂದ ಕೂಡಿದೆ: ಸಿ ಟಿ ರವಿ

ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹಪೀಡಿತರಾಗಿ ಕೊಟ್ಟಿರುವ ಪಠ್ಯ ಪರಿಷ್ಕರಣೆ ಕುರಿತ ಕಾಂಗ್ರೆಸ್‌ ನಾಯಕರ ಹೇಳಿಕೆಯು ಅಸಹಿಷ್ಣು ಭಾವನೆಯಿಂದ ಕೂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸರ್ಕಾರವು ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದರ ಬಗ್ಗೆ ಚರ್ಚಿಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರವಾಗಿ ಅವಲೋಕನ ಮಾಡದೆ, ಸಾಧಕ-ಬಾದಕ ಅಧ್ಯಯನ ಮಾಡದೆ, ರಾಜಕೀಯ ಕಾರಣಕ್ಕಾಗಿ ಪೂರ್ವಾಗ್ರಹಪೀಡಿತರಾಗಿ ಕಾಂಗ್ರೆಸ್‌ ನಾಯಕರು ಹೇಳಿಕೆ ನೀಡುತ್ತಿದ್ದಾರೆ.

ಶಿಕ್ಷಣ ಕ್ಷೇತ್ರವು ಪೂರ್ವಾಗ್ರಹಪೀಡಿತ ಮನಸ್ಥಿತಿಯಿಂದ ಹೊರಬರಬೇಕು. ಉತ್ತಮ ನಾಗರಿಕರನ್ನು ಶಿಕ್ಷಣ ತಯಾರು ಮಾಡಬೇಕು. ಸಮಾನ ಮನಸ್ಕರ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗುವುದು. ಅದರ ಬಳಿಕ ಮುಂದಿನ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದರು.

ಮಾಜಿ ಸಚಿವ ಬಿ ಸಿ ನಾಗೇಶ್ ಮಾತನಾಡಿ, ದ್ವೇಷದಿಂದ ವರ್ತಿಸುತ್ತಿರುವುದು ಸರಿಯಲ್ಲ. ಎನ್‍ಸಿಇಆರ್‍ಟಿ ಸೂಚನೆ ಮೇರೆಗೆ ನಾವು ಹಿಂದೆ ಬದಲಾವಣೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ತಪ್ಪುಗಳನ್ನು ಸರಿಪಡಿಸುವ ಉದ್ದೇಶ ನಮ್ಮದಾಗಿತ್ತು. ಈಗ ದ್ವೇಷದಿಂದ ಬದಲಾವಣೆ ಮಾಡಿದರೆ ಅದರಿಂದ ಮಕ್ಕಳು, ಪೋಷಕರ ಮೇಲೆ ದುಷ್ಪರಿಣಾಮ ಬೀರಲಿದೆ. ಬದಲಾವಣೆ ಮಾಡುವುದಿದ್ದರೆ ಪೋಷಕರ ಗಮನಕ್ಕೆ ತಂದು ಮಾಡಬೇಕು ಎಂದು ಒತ್ತಾಯಿಸಿದರು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರಾದ ಡಾ. ಸಿ ಎನ್ ಅಶ್ವತ್ಥನಾರಾಯಣ, ಬಿ ಸಿ ನಾಗೇಶ್, ಸುರೇಶ್‌ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಅ ದೇವೇಗೌಡ ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button