[t4b-ticker]
ರಾಜ್ಯ

ಬಸ್‌ನಲ್ಲಿ ಪ್ರಯಾಣಿಸಿ ʼಶಕ್ತಿʼಗೆ ಚಾಲನೆ ನೀಡಿದ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಉದ್ಘಾಟಿಸಿ, ವಿಧಾನಸೌಧದಿಂದ ಮೆಜೆಸ್ಟಿಕ್‌ವರೆಗೆ ಬಸ್‌ ಪ್ರಯಾಣ ಮಾಡಿದರು.

ಮೊದಲ ಪ್ರಯಾಣದಲ್ಲಿದ್ದ ಮಹಿಳೆಯರಿಗೆ ಟಿಕೆಟ್‌ ಜೊತೆ ಗುಲಾಬಿ ಹೂವು ಮತ್ತು ಸಿಹಿ ನೀಡಿ ಸತ್ಕರಿಸಲಾಯಿತು.

ಮುಖ್ಯಮಂತ್ರಿಯವರು ಶಕ್ತಿ ಯೋಜನೆಗೆ ಚಾಲನೆ ನೀಡಿದ ನಂತರ ವಿಧಾನಸೌಧದಿಂದ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ತೆರಳಿ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಬಸ್‌ಗಳಿಗೆ ಚಾಲನೆ ನೀಡಿದರು. ನಂತರ ವಿಧಾನಸೌಧಕ್ಕೆ ಬಸ್‌ನಲ್ಲಿಯೇ ಹಿಂದಿರುಗಿ ಪತ್ರಿಕಾಗೋಷ್ಠಿ ನಡೆಸಿದರು.

ಇದಕ್ಕೂ ಮುನ್ನ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಪುರುಷರಷ್ಟೇ ಮಹಿಳೆಯರೂ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಕ್ತಿ ಯೋಜನೆ ಮಹಿಳೆಯರಿಗಾಗಿ ಮಾಡಿರುವ ಕಾರ್ಯಕ್ರಮ. ಸಮಾಜದಲ್ಲಿ ಅರ್ಧದಷ್ಟಿರುವ ಮಹಿಳೆಯರು ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರು, ಮಹಿಳೆಯರು, ಅವಕಾಶಗಳಿಂದ ಹಾಗೂ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ ಎಂದರು.

ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅನೇಕ ಮುಂದುವರೆದ ದೇಶಗಳಲ್ಲಿ ಮಹಿಳೆಯರ ಪಾಳ್ಗೊಳ್ಳುವಿಕೆ ಪ್ರಮಾಣವನ್ನು ತಿಳಿಸಿದ ಮುಖ್ಯಮಂತ್ರಿಗಳು, ಅಮೆರಿಕಾದಲ್ಲಿ ಶೇ 53 ರಷ್ಟು, ಚೈನಾ ದಲ್ಲಿ ಶೇ 54 ರಷ್ಟು, ಆಸ್ಟ್ರೇಲಿಯಾದಲ್ಲಿ ಶೇ 57, ಇಂಡೋನೇಶಿಯಾದಲ್ಲಿ ಶೇ 57 ರಷ್ಟು ಪಾಲ್ಗೊಳ್ಳುತ್ತಾರೆ. ಬಾಂಗ್ಲಾದೇಶದಲ್ಲಿ ಶೇ 30 ರಷ್ಟು ಮಹಿಳೆಯರು ಸಾರ್ವಜನಿಕ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಭಾರತದಲ್ಲಿ ಕೇವಲ 24 ರಷ್ಟು ಮಹಿಳೆಯರು ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.  ದೇಶದಲ್ಲಿ 2014ರ ನಂತರ ಶೇ 30ರಷ್ಟಿದ್ದ ಪ್ರಮಾಣ ಶೇ 24ಕ್ಕೆ ಇಳಿದಿದೆ.  ಯಾವ ದೇಶಗಳಲ್ಲಿ ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ ಆ ದೇಶ ಅಭಿವೃದ್ಧಿಯಾಗುತ್ತದೆ ಎಂದರು.

ಮಹಿಳೆಯರಿಗೆ ಶಕ್ತಿ ತುಂಬಿದಾಗ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕ್ರಮೇಣ ಅಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಗೃಹ ಜ್ಯೋತಿ ಯೋಜನೆ ಜುಲೈ 1 ರಿಂದ ಜಾರಿಗೆ ಬರುತ್ತಿದೆ. ಎಲ್ಲಾ ಜಾತಿ ಮತ್ತು ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ.  ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವು ಹಿಂದೆ ನುಡಿದಂತೆ ನಡೆದಿದ್ದೇವೆ. ಹಿಂದಿನ ಬಾರಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದಿದ್ದೇವೆ.

ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ.  59,000 ಕೋಟಿ ರೂಪಾಯಿ ಅಗತ್ಯವಿದೆ. ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಯಾರಿಗೆ ನೀಡುತ್ತಿದ್ದೇವೆ ಎನ್ನುವುದು ಮುಖ್ಯ ಎಂದರು.

10 ಕೆಜಿ ಆಹಾರ ಧಾನ್ಯವನ್ನು ಅಂತ್ಯೋದಯ ಕಾರ್ಡುದಾರರಿಗೆ ನೀಡುವ ಭರವಸೆ ನೀಡಿದ್ದೇವೆ. ಇದಕ್ಕೆ 10,100 ಕೋಟಿ ರೂಪಾಯಿಗಳ ಅಗತ್ಯವಿದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲೇಬೇಕು. ಹಸಿವಿನ ಕಷ್ಟ ಊಟವಿಲ್ಲದವರಿಗೆ ತಿಳಿಯುತ್ತದೆ. ಹೊಟ್ಟೆ ತುಂಬಿ ಅಜೀರ್ಣ ಮಾಡಿಕೊಂಡವರಿಗೆ ತಿಳಿದಿರುವುದಿಲ್ಲ ಎಂದರು.

ಹೆಣ್ಣುಮಕ್ಕಳು ಇಂದು ಒಂದು ಗಂಟೆಯಿಂದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬೇಕು. ಎಲ್ಲಾ ಮಹಿಳೆಯರಿಗೂ ಸ್ಮಾರ್ಟ್ ಕಾರ್ಡುಗಳನ್ನು ನೀಡಲಾಗುವುದು. ಈ ಯೋಜನೆ ವಿದ್ಯಾರ್ಥಿನಿಯರಿಗೂ   ಅನ್ವಯವಾಗುತ್ತದೆ. ಈ ಯೋಜನೆಗಳಲ್ಲಿ ಯಾರೂ ಮಧ್ಯವರ್ತಿಗಳಿಲ್ಲ. ನೇರವಾಗಿ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇದೇ ವೇಳೆ ಗುಲಾಬಿ ಬಣ್ಣದ ಸ್ಮಾರ್ಟ್, ಶಕ್ತಿ ಯೋಜನೆಯ ಲಾಂಛನವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ ಜೆ ಜಾರ್ಜ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button