[t4b-ticker]
ರಾಜ್ಯ

ಕಾಂಗ್ರೆಸ್‌ ಗ್ಯಾರಂಟಿ ಐತಿಹಾಸಿಕ ಘೋಷಣೆ

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಸಹ ಪ್ರಸಕ್ತ ಆರ್ಥಿಕ ವರ್ಷದಿಂದಲೇ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐತಿಹಾಸಿಕ ಘೋಷಣೆ ಮಾಡಿದರು.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆಯ ತಾರತಮ್ಯ ಇಲ್ಲದೆ ಸಮಸ್ತ ಕನ್ನಡಿಗರಿಗೆ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಗೃಹ ಜ್ಯೋತಿ: ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್‌ ಒದಗಿಸಲಾಗುವುದು. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್‌ ಗೆ ಈ ಯೋಜನೆ ಅನ್ವಯವಾಗುತ್ತದೆ. ಅಲ್ಲಿಯ ವರೆಗಿನ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು ಸಿದ್ದರಾಮಯ್ಯ ಅವರು ಘೋಷಿಸಿದರು.

ಗೃಹ ಲಕ್ಷ್ಮಿ: ರಾಜ್ಯದಲ್ಲಿರುವ ಬಿಪಿಎಲ್‌ ಹಾಗೂ ಎಪಿಎಲ್‌ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂಪಾಯಿ ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು; ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆ ಮಾಹಿತಿ ಒದಗಿಸಬೇಕು. ಜೂನ್‌ 15 ರಿಂದ ಜುಲೈ 15 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಜುಲೈ 15 ರಿಂದ ಆಗಸ್ಟ್‌ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.

ಅನ್ನ ಭಾಗ್ಯ: ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರ ಧಾನ್ಯವನ್ನು ಬಿಜೆಪಿ ಸರ್ಕಾರವು 5 ಕೆಜಿಗೆ ಇಳಿಸಿದೆ. ಇದೀಗ ಆಹಾರ ಧಾನ್ಯದ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಜೂನ್‌ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1 ರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.

ಶಕ್ತಿ: ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಜೂನ್‌ 11 ರಿಂದ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯು ಶೇ. 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ. ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.

ಯುವನಿಧಿ: 2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂಪಾಯಿ ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂಪಾಯಿ ನಿರುದ್ಯೋಗ ಭತ್ಯೆ ನೀಡಲಾಗುವುದು. ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು.

ನನ್ನ ಹೆಂಡ್ತಿಗೂ ಫ್ರೀ: ಸಿದ್ದರಾಮಯ್ಯ

ಬಸ್ ಪ್ರಯಾಣ “ನನ್ನ ಹೆಂಡ್ತಿಗೂ ಫ್ರೀ”. ಹೀಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.

ರಾಜಹಂಸನೂ ಫ್ರೀ ಕೊಟ್ಟುಬಿಡ್ರಿ: ಉಚಿತ ಬಸ್ ಪ್ರಯಾಣದ ವಿವರ ನೀಡುತ್ತಿದ್ದ ಮುಖ್ಯಮಂತ್ರಿಗಳು ಬಾಯಿತಪ್ಪಿ “ರಾಜಹಂಸ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು” ಅಂದು ಬಿಟ್ಟರು. ಗಾಭರಿ ಬಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “ರಾಜಹಂಸ ಉಚಿತ ಅಲ್ಲ” ಎಂದು ನೆನಪಿಸಿದರು. ಈ ವೇಳೆ ಮುಖ್ಯಮಂತ್ರಿಗಳು, “ರಾಜಹಂಸದಲ್ಲೂ ಉಚಿತವಾಗಿ ಓಡಾಡಲಿ ಬಿಡ್ರಿ” ಎಂದರು. ಇದಕ್ಕೆ ಉತ್ತರಿಸಿದ ಸಚಿವರು, “ಎಲ್ಲರೂ ರಾಜಹಂಸಕ್ಕೆ ನುಗ್ತಾರೆ. ಉಳಿದ ಬಸ್ ಗಳನ್ನು ಹತ್ತುವುದಿಲ್ಲ” ಎಂದರು.

ಶೇ 94 ರಷ್ಟು ಉಚಿತ: ಐಷಾರಾಮಿ ಮತ್ತು ಎಸಿ ಹಾಗೂ ಸ್ಲೀಪಿಂಗ್ ಬಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿರುವುದರಿಂದ ಶೇ 94 ರಷ್ಟು ಬಸ್ ಗಳಲ್ಲಿ ಉಚಿತ ಅನುಕೂಲ ಒದಗಿಸಿದಂತಾಗಿದೆ.

ತೃತೀಯ ಲಿಂಗಿಗಳಿಗೂ ಉಚಿತ:  ಪ್ರಥಮ ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀತ ಲಿಂಗಿಗಳಿಗೂ ಒದಗಿಸಲಾಗಿದೆ. ಈಗಾಗಲೇ ಸಾಮಾಜಿಕ ಭದ್ರತೆ ಯೋಜನೆಯ ಅಡಿಯಲ್ಲಿ ಪಿಂಚಣಿ ಅಥವಾ ಮಾಸಾಶನ ಪಡೆಯುತ್ತಿರುವ ಮಹಿಳೆಯರಿಗೂ ಗೃಹ ಲಕ್ಷ್ಮಿ ಯೋಜನೆಯು ಅನ್ವಯವಾಗುತ್ತದೆ. ಮಾಸಾಶನದ ಜತೆಗೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಕೂಡ ಇವರ ಖಾತೆಗೆ ಜಮಾ ಆಗಲಿದೆ.

Related Articles

Leave a Reply

Your email address will not be published. Required fields are marked *

Back to top button