[t4b-ticker]
ಜಿಲ್ಲೆರಾಜ್ಯ

ಸಮಾಧಾನ, ಶಾಂತಿ ಎಂಬ ಸಂಪತ್ತುಗಳ ಅಗತ್ಯ ಹೆಚ್ಚು: ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀ

“ಮನುಷ್ಯನಿಗೆ ಎಲ್ಲ ರೀತಿಯ ಸಂಪತ್ತುಗಳಿದ್ದರೂ ಅತೃಪ್ತನಾಗಿದ್ದು, ಪ್ರಸ್ತುತ ಸಮಾಧಾನ, ಶಾಂತಿ ಎಂಬ ಸಂಪತ್ತುಗಳ ಅಗತ್ಯ ಹೆಚ್ಚಾಗಿದೆ” ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಅಡವಿ ಮಠದ ಆವರಣದಲ್ಲಿ ಗುರುವಾರ ಮಠಾಧ್ಯಕ್ಷ ಶಿವಲಿಂಗೇಂದ್ರ ಸ್ವಾಮೀಜಿ ಅವರಿಗೆ 60 ವರ್ಷ ತುಂಬಿದ ಅಂಗವಾಗಿ ಗ್ರಾಮಸ್ಥರು ಹಾಗೂ ಭಕ್ತರು ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಮಠಗಳು ಮರಗಳಿದ್ದಂತೆ. ಬಸವಳಿದವರಿಗೆ ಶಾಂತಿ ಹಾಗೂ ಸಮಾಧಾನ ನೀಡುವ ಕೇಂದ್ರಗಳಾಗಿವೆ. ರಾಜ್ಯದಲ್ಲಿ ಶಾಂತಿ ನೆಮ್ಮದಿ, ಪ್ರೀತಿ, ವಿಶ್ವಾಸದಿಂದ ನೆಲೆಸಿದ್ದರೆ ಅದಕ್ಕೆ ಮಠ-ಮಾನ್ಯಗಳ ಕೊಡುಗೆ ಅಪಾರವಾಗಿದೆ. ಮಠ ಮಾನ್ಯಗಳಿಂದ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದರಿಂದ ಸಮಾಜದಲ್ಲಿ ಉತ್ತಮ ಜೀವನ ಸಾಧ್ಯವಾಗಿದೆ” ಎಂದರು.

“ಶಿವಲಿಂಗೇಂದ್ರ ಸ್ವಾಮೀಜಿ ತಮ್ಮ ಜೀವನವನ್ನು ಧಾರ್ಮಿಕ ಕಾರ್ಯಗಳು, ಶಿಕ್ಷಣ, ವಿದ್ಯಾರ್ಥಿ ನಿಲಯಗಳು, ವೃದ್ಧಾಶ್ರಮ ಮುಂತಾದ ಸಮಾಜಮುಖಿ ಸೇವೆಗೆ ತೊಡಗಿಸಿಕೊಂಡಿದ್ದರಿಂದ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಸೇವೆಯನ್ನು ಗುರ್ತಿಸಿದ ಭಕ್ತರು ಆಯೋಜಿಸಿರುವ ಕಾರ್ಯಕ್ರಮ ಅಭಿನಂದನೀಯ” ಎಂದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಾತನಾಡಿ “ಮೈಸೂರು ಅರಸರು ಮತ್ತು ಜಿಲ್ಲೆ ಹಾಗೂ ತಾಲ್ಲೂಕಿಗೆ ಅವಿನಾಭಾವ ಸಂಬಂಧವಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆಯ ಸ್ಮರಣಾರ್ಥ ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಾಲಯ ನಿರ್ಮಿಸಿದರು. ಬೆಟ್ಟದಕೋಟೆ ಅರಸರು ಹಂಗಳ ಮುಂತಾದ ಕಡೆ ನೆಲೆಸಿದ್ದರು. ನೀಲಗಿರಿ ಪ್ರದೇಶದಲ್ಲಿಯೂ ಆಳ್ವಿಕೆ ನಡೆಸಿದ್ದರು” ಎಂದು ಸ್ಮರಿಸಿದರು.

“ನಾನು ಅವಕಾಶ ಸಿಕ್ಕಾಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರಕ್ಕೆ ಬರುತ್ತಿರುತ್ತೇನೆ. ಮಠಗಳು ಪರಂಪರೆ ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಶಿವಲಿಂಗೇಂದ್ರ ಸ್ವಾಮೀಜಿ ಅವರಿಗೆ 60 ಸಂವತ್ಸರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಗುರುವಂದನೆ ಕಾರ್ಯಕ್ರಮ ಆಯೋಜಿಸಿ ಗೌರವಿಸುತ್ತಿರುವುದು ಅಭಿನಂದನಾರ್ಹ” ಎಂದರು.

ಸುತ್ತೂರು ಮಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು “ಬ್ರಹ್ಮಾಂಡದಲ್ಲಿ ಮನುಷ್ಯನ ಅಸ್ತಿತ್ವ ತುಂಬ ಚಿಕ್ಕದಾಗಿದ್ದರೂ ದೊಡ್ಡವನು ಎಂಬ ಭಾವನೆ ಹೆಚ್ಚಾಗಿದೆ. ಮಾನವನಿಗೆ ಆಲೋಚಿಸುವ ಶಕ್ತಿಯಿರುವುದರಿಂದ ಉಳಿದೆಲ್ಲ ಜೀವಿಗಳಿಗಿಂತ ಉತ್ತಮ ಬದುಕು ನಡೆಸುತ್ತಿದ್ದಾನೆ. ಆದರೆ, ದುಶ್ಚಟಗಳಿಂದ ನಾಶವಾಗುತ್ತಿದ್ದಾನೆ. ದೃಢ ಮನಸ್ಸು ಮಾಡಿದರೆ ದುಶ್ಚಟಗಳನ್ನು ಬಿಡಲು ಸಾಧ್ಯವಾಗುತ್ತದೆ. ಈಗ ಸಿಕ್ಕಿರುವ ಬದುಕನ್ನು ರಾಗ-ದ್ವೇಷಗಳಿಗೆ ತೊಡಗಿಸದೆ ಸಾತ್ವಿಕ ಜೀವನ ನಡೆಸಬೇಕು” ಎಂದು ಕಿವಿಮಾತು ಹೇಳಿದರು.

“ಶಿವಲಿಂಗೇಂದ್ರ ಸ್ವಾಮೀಜಿ ಆಧ್ಯಾತ್ಮಿಕ ವಿಷಯಗಳ ಅಧ್ಯಯನದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಶಾಲೆ, ವೃದ್ಧಾಪ್ಯದಲ್ಲಿ ಶಾಂತಿ ಬಯಸುವ ಹಿರಿಯ ಜೀವಗಳಿಗೆ ಆಶ್ರಯ ನೀಡುವ ಸಲುವಾಗಿ ಹಿರಿಯರ ಮನೆ ನಡೆಸುತ್ತಿರುವುದು ಶ್ಲಾಘನೀಯ” ಎಂದರು.

“ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಂಡಿದ್ದರು. ನಂತರ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಮಹದೇವಪ್ರಸಾದ್ ಅದನ್ನು ಮುಂದುವರಿಸಿಕೊಂಡು ಬಂದರು. ತಾಲ್ಲೂಕಿನ ದೊಡ್ಡ ಜಲಾಶಯವಾದ ನಲ್ಲೂರು ಅಮಾನಿಕೆರೆಗೆ ನೀರು ತುಂಬಿಸುವ ಯೋಜನೆಗೆ ತಾಂತ್ರಿಕ ಸಮಸ್ಯೆಯಿದ್ದರೂ ನೂತನ ಶಾಸಕ ಎಚ್ ಎಂ ಗಣೇಶ್‌ಪ್ರಸಾದ್ ತಂದೆಯ ಕನಸು ನನಸು ಮಾಡಲು ಶ್ರಮಿಸಲಿದ್ದಾರೆ” ಎಂದು ಹೇಳಿದರು.

ಶಾಸಕ ಎಚ್ ಎಂ ಗಣೇಶ್‌ಪ್ರಸಾದ್ ಅವರು “ಪಡಗೂರು ಮಠ ಹಾಗೂ ಸ್ವಾಮೀಜಿಗಳು ಇನ್ನೂ ಹೆಚ್ಚಿನ ಕಾಲ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಬೇಕು. ಮಠದ ಸಮಾಜಮುಖಿ ಕಾರ್ಯಗಳಿಗೆ ನನ್ನ ಸಹಕಾರವಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರು ಇದ್ದರು.

Related Articles

Leave a Reply

Your email address will not be published. Required fields are marked *

Back to top button