[t4b-ticker]
ಜಿಲ್ಲೆ

ಸಂಬಂಧಿಯಿಂದ ಆಸ್ತಿ ಕಬಳಿಸಲು ಬದುಕಿದ್ದ ವೃದ್ಧೆ ಹೆಸರಲ್ಲಿ ಮರಣ ಪ್ರಮಾಣ!

ಆಸ್ತಿ ಕಬಳಿಸುವ ಸಲುವಾಗಿ ಸಂಬಂಧಿಯ ಪುತ್ರ ವೃದ್ಧೆಯೊಬ್ಬರು ಬದುಕಿದ್ದರೂ ಮೃತಪಟ್ಟಿರುವುದಾಗಿ ಬೇಲೂರಿನ ತಹಸೀಲ್ದಾರ್ ಕಚೇರಿಯಲ್ಲಿ ಮರಣ ಪ್ರಮಾಣ ಪತ್ರ ಪಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ವೃದ್ಧೆಯ ಪುತ್ರ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೇಲೂರಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದಿಗೆರೆ ಗ್ರಾಮದ ದಿವಂಗತ ಹುಲೀಗೌಡ ಎಂಬುವರ ಪತ್ನಿ ಪಾರ್ವತಮ್ಮ ಅವರ ಮರಣ ಪ್ರಮಾಣ ಪತ್ರವನ್ನು ತಹಸೀಲ್ದಾರ್ ಕಚೇರಿಯಿಂದ ಪಡೆದಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ಪಾರ್ವತಮ್ಮ ಅವರ ಹೆಸರಿನಲ್ಲಿ 32 ಗುಂಟೆ ಜಮೀನು ಇದೆ. ಈ ಜಮೀನನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಪಾರ್ವತಮ್ಮ ಅವರ ಹತ್ತಿರದ ಸಂಬಂಧಿಕರೊಬ್ಬರ ಮಗ 2020, ಏಪ್ರಿಲ್ 10ರಂದು ಪಾರ್ವತಮ್ಮ ಮೃತಪಟ್ಟಿದ್ದಾರೆ ಎಂದು 2020, ಏಪ್ರಿಲ್ 20ರಂದು ನೋಂದಣಿ ಮಾಡಿಸಿದ್ದಾರೆ. ನಂತರ 2020, ಅಕ್ಟೋಬರ್ 14ರಂದು ಪಾರ್ವತಮ್ಮ ಅವರ ಹೆಸರಿನಲ್ಲಿ ಮರಣ ದೃಢೀಕರಣ ಪತ್ರವನ್ನೂ ಪಡೆದಿದ್ದಾರೆ.

ಮುದಿಗೆರೆ ಗ್ರಾಮದ ಪಾರ್ವತಮ್ಮ ಅವರಿಗೆ ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದು, ಎಲ್ಲರಿಗೂ ಆಸ್ತಿ ವಿಭಾಗ ಮಾಡಿಕೊಟ್ಟಿದ್ದರು. ತಮ್ಮ ಜೀವನಾಂಶಕ್ಕೆ ಎಂದು 32 ಗುಂಟೆ ಜಮೀನನ್ನು ಅವರ ಹೆಸರಿನಲ್ಲೇ ಇಟ್ಟುಕೊಂಡಿದ್ದರು. ಅವರು ಬೇರೆ ಗ್ರಾಮದಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿದ್ದರು. ಪಾರ್ವತಮ್ಮ ಸಂಬಂಧಿಕರ ಮಗ ಮರಣ ದೃಢೀಕರಣ ಪತ್ರ ಪಡೆದಿರುವ ವಿಷಯ 10 ದಿನಗಳ ಹಿಂದಷ್ಟೇ ಪಾರ್ವತಮ್ಮ ಕುಟುಂಬದವರಿಗೆ ಗೊತ್ತಾಗಿ ಗ್ರಾಮಕ್ಕೆ ಆಗಮಿಸಿದ್ದಾರೆ.

ಈ ಬಗ್ಗೆ ಬೇಲೂರಿನ ತಹಸೀಲ್ದಾರ್ ಕಚೇರಿಯಲ್ಲಿ ಪರಿಶೀಲಿಸಿದಾಗ 2020ರ ಅವಧಿಯಲ್ಲಿ ಪಾರ್ವತಮ್ಮ ಮೃತಪಟ್ಟಿದ್ದಾರೆ ಎಂದು ಮರಣ ದೃಢೀಕರಣ ಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಪಾರ್ವತಮ್ಮ ಪುತ್ರ ಮಲ್ಲೇಶ್ ಮಂಗಳವಾರ ಬೇಲೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button