[t4b-ticker]
ರಾಜ್ಯವಿಶ್ಲೇಷಣೆ

ವಿಧಾನಸಭೆ ಸಭೆ ಸ್ಪೀಕರ್‌ ಆಗಿ ಯು ಟಿ ಖಾದರ್‌ ಅವಿರೋಧ ಆಯ್ಕೆ

ಕಾಂಗ್ರೆಸ್‌ ಹಿರಿಯ ಮುಖಂಡ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸತತ ಐದನೇ ಬಾರಿಗೆ ಆಯ್ಕೆಯಾಗಿರುವ ಯು ಟಿ ಖಾದರ್‌ ಅವರು ವಿಧಾನಸಭೆಯ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕರ್ನಾಟಕ ವಿಧಾನಸಭೆಯ ಮೊದಲ ಮುಸ್ಲಿಮ್‌ ಸ್ಪೀಕರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ಆನಂತರ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಖಾದರ್‌ ಅವರು ಈ ಬಾರಿಯೂ ಮಂತ್ರಿಗಿರಿಯ ನಿರೀಕ್ಷೆಯಲ್ಲಿದ್ದರು. ಈ ಬಾರಿ ಮುಸ್ಲಿಮ್‌ ಸಮುದಾಯ ಹಿಂದೆಂದಿಗಿಂತಲೂ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಿದೆ. ಅಲ್ಲದೇ, ಮುಸ್ಲಿಮ್‌ ಸಮುದಾಯದಿಂದ ಎಂಟು ಶಾಸಕರು ಆಯ್ಕೆಯಾಗಿದ್ದು, ಎಲ್ಲರಿಗೂ ಸಚಿವ ಸ್ಥಾನ ನೀಡುವುದು ತ್ರಾಸದಾಯವಾಗಿರುವುದರಿಂದ ಅವರನ್ನು ಸ್ಪೀಕರ್‌ ಹುದ್ದೆಗೆ ಪರಿಗಣಿಸಲಾಗಿದೆ ಎಂದು ತಿಳಿದು ಬಂದಿದೆ.

ಹಿರಿಯ ನಾಯಕರಾದ ಆರ್‌ ವಿ ದೇಶಪಾಂಡೆ, ಎಚ್‌ ಕೆ ಪಾಟೀಲ್‌, ಜಯಚಂದ್ರ ಅವರು ಸ್ಪೀಕರ್‌ ಹುದ್ದೆಗೇರಲು ಒಪ್ಪದಿರುವುದು ಹಾಗೂ ಪಕ್ಷದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಬಣಗಳ ನಡುವಿನ ಸಂಘರ್ಷ ತಾರಕಕ್ಕೇರಿ, ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾದರೆ ಪಕ್ಷನಿಷ್ಠೆಗೆ ಖಾದರ್‌ ಬದ್ಧವಾಗಿರುತ್ತಾರೆ ಎಂಬುದು ಅವರ ಆಯ್ಕೆಯ ಹಿಂದಿನ ಉದ್ದೇಶ ಎನ್ನಲಾಗುತ್ತಿದೆ.

ಈ ಮಧ್ಯೆ, ಹಿಂದುತ್ವದ ಪ್ರಯೋಗಶಾಲೆ ಎಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡದಿಂದ ಸತತ ಐದನೇ ಬಾರಿಗೆ ಗೆದ್ದುಬಂದಿರುವ ಖಾದರ್‌ ಅವರಿಗೆ ಪ್ರಮುಖ ಸ್ಥಾನ ನೀಡುವ ಮೂಲಕ ಪ್ರತಿಪಕ್ಷ ಬಿಜೆಪಿ ಬಲವಾದ ಸಂದೇಶ ರವಾನಿಸುವ ಅವಕಾಶವನ್ನೂ ಕಾಂಗ್ರೆಸ್‌ ಕಳೆದುಕೊಂಡಿದೆ ಎಂಬ ಚರ್ಚೆಗಳೂ ನಡೆಯುತ್ತಿವೆ.

Related Articles

Leave a Reply

Your email address will not be published. Required fields are marked *

Back to top button