[t4b-ticker]
Uncategorizedಜಿಲ್ಲೆರಾಜ್ಯವಿಶ್ಲೇಷಣೆ

ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಲಿಂಗಾಯತ ನಾಯಕತ್ವ ಗಣೇಶ್‌ ಪ್ರಸಾದ್‌ಗೆ ಒಲಿಯುವುದೇ?

ಹಳೇ ಮೈಸೂರು ವಿಭಾಗದ 11 ಜಿಲ್ಲೆಗಳಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಜಯ ಗಳಿಸಿರುವ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರು ಏಕೈಕ ಲಿಂಗಾಯತ ಸಮುದಾಯದ ಚುನಾಯಿತ ಪ್ರತಿನಿಧಿ ಎಂಬುದು ಈ ಬಾರಿ ಚುನಾವಣೆಯ ವಿಶೇಷ.

ಲಿಂಗಾಯತ ಸಮುದಾಯದಲ್ಲಿ ಬಣಜಿಗ ಪಂಗಡಕ್ಕೆ ಸೇರಿರುವ 38 ವರ್ಷದ ಗಣೇಶ್‌ ಪ್ರಸಾದ್‌ ಅವರು ಮೊದಲ ಚುನಾವಣೆಯಲ್ಲಿಯೇ 36,675 ಮತಗಳಿಂದ ಬಿಜೆಪಿಯ ನಿರಂಜನ್‌ ಕುಮಾರ್‌ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ತಮ್ಮ ತಂದೆ ಹಾಗೂ ಹಳೆಯ ಮೈಸೂರು ಭಾಗದ ಪ್ರಬಲ ಲಿಂಗಾಯತ ನಾಯಕ, ಮಾಜಿ ಸಚಿವ ಎಚ್‌ ಎಸ್‌ ಮಹದೇವ ಪ್ರಸಾದ್‌ ಅವರು ಜೀವಿತಾವಧಿಯಲ್ಲಿ ಮಾಡಲಾಗದ ಸಾಧನೆಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಮಹದೇವ ಪ್ರಸಾದ್‌ ಅವರು ನಿಧನರಾದ ಸಂದರ್ಭದಲ್ಲಿ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಹಕಾರ ಸಚಿವರಾಗಿದ್ದರು. ಅಲ್ಲದೇ, ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯ ಪ್ರಮುಖ ನಾಯಕರಾಗಿದ್ದರು. ಅವರ ನಿರ್ಗಮನದ ಬಳಿಕ ಲಿಂಗಾಯತ ಸಮುದಾಯ ನಾಯಕತ್ವದ ಕೊರತೆ ಎದುರಿಸುತ್ತಿದೆ ಎಂಬುದು ವಾಸ್ತವ.

ಗುಂಡ್ಲುಪೇಟೆ, ಚಾಮರಾಜನಗರ, ನಂಜನಗೂಡು, ವರುಣ, ಟಿ ನರಸೀಪುರ ಹಾಗೂ ಮೈಸೂರಿನ ವಿವಿಧ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಹಲವು ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಅಲ್ಲದೇ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ ಮತ್ತು ಮಡಿಕೇರಿ ಭಾಗದಲ್ಲಿ ಈ ಬಾರಿ ಯಾವುದೇ ಲಿಂಗಾಯತ ಅಭ್ಯರ್ಥಿ ಕಾಂಗ್ರೆಸ್‌ನಿಂದ ಗೆದ್ದಿಲ್ಲ. ಈ ಎಲ್ಲಾ ಕಡೆಗಳಲ್ಲಿ ಕೆಲವು ಕಡೆ ಚದುರಿದ ರೀತಿಯಲ್ಲಿ ಮತ್ತೆ ಕೆಲವು ಕಡೆ ಪ್ರಮುಖ ಸ್ಥಾನದಲ್ಲಿ ಲಿಂಗಾಯತ ಮತಗಳು ಇವೆ. ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಭವಿಷ್ಯದ ದೃಷ್ಟಿಯಿಂದ ಲಿಂಗಾಯತ ಸಮುದಾಯಕ್ಕೆ ನಾಯಕತ್ವ ರೂಪಿಸುವುದು ಅತ್ಯಗತ್ಯವಾಗಿದೆ. ಇದಲ್ಲದೇ ಸುತ್ತೂರು ಮಠದಂತ ಪ್ರಬಲವಾದ ಲಿಂಗಾಯತ ಮಠವೂ ಈ ಭಾಗದಲ್ಲಿದೆ ಎಂಬುದು ಮತ್ತೊಂದು ಮಹತ್ವದ ವಿಚಾರವಾಗಿದೆ.

ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುತೇಕ ಕಡೆ ಲಿಂಗಾಯತ ಸಮುದಾಯದ ಅಭ್ಯರ್ಥಿಗಳು ಗೆದ್ದರೂ ಈ ಭಾಗದಿಂದ ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಸಮುದಾಯ ಪ್ರತಿನಿಧಿಸುವ ಪ್ರಬಲ ನಾಯಕತ್ವ ಇಲ್ಲ. ಮಹದೇವ ಪ್ರಸಾದ್‌ ಅವರ ನಿರ್ಗಮನದ ಬಳಿಕ ಸಮುದಾಯಕ್ಕೆ ಪ್ರಬಲ ನಾಯಕತ್ವ ಇಲ್ಲ ಎಂಬ ಕೊರಗು ಕಾರ್ಯಕರ್ತರು ಮತ್ತು ಸಮುದಾಯದ ಒಳಗೆ ಗುಪ್ತಗಾಮಿನಿಯಂತೆ ಪ್ರವಹಿಸುತ್ತಿದೆ. ಮಹದೇವ ಪ್ರಸಾದ್‌ ಅವರ ಅಕಾಲಿಕ ನಿಧನದ ನಂತರ ಉಪ ಚುನಾವಣೆಯಲ್ಲಿ ಅವರ ಪತ್ನಿ ಗೀತಾ ಮಹದೇವ ಪ್ರಸಾದ್‌ ಅವರನ್ನು ಗೆಲ್ಲಿಸಿ, ಕಾಂಗ್ರೆಸ್‌ ಸರ್ಕಾರದಲ್ಲಿ ಅವರನ್ನು ಸಕ್ಕರೆ ಮತ್ತು ಸಣ್ಣ ಕೈಗಾರಿಕೆ ಸಚಿವರನ್ನಾಗಿ ಮಾಡಲಾಗಿತ್ತು. ಆದರೆ, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಪರಾಜಿತರಾಗಿದ್ದರು. ಇದು ಕಾಂಗ್ರೆಸ್‌ನ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡಿತ್ತು.

ಹಾಲಿ ಚುನಾವಣೆಯಲ್ಲಿ ಗಣೇಶ್‌ ಅವರು ದಾಖಲೆಯ ಗೆಲುವು ದಾಖಲಿಸಿರುವುದು ಸಮುದಾಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ವಯಸ್ಸಿನ ದೃಷ್ಟಿಯಿಂದಲೂ ಯುವಕರಾಗಿರುವ ಮತ್ತು ಸುಶಿಕ್ಷಿತಾಗಿರುವ ಗಣೇಶ್‌ ಪ್ರಸಾದ್‌ ಅವರಿಗೆ ಕೆಲವೇ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆಗಳು ಸಮಯದಾಯದಲ್ಲಿ ಗರಿಗೆದರಿವೆ.

ಆದರೆ, ಸಾಮಾಜಿಕ ನ್ಯಾಯ, ಪ್ರಾಂತ್ಯ ಪ್ರಾತಿನಿಧ್ಯ, ಅನುಭವ ಹೀಗೆ ನಾನಾ ಮಾನದಂಡಗಳನ್ನು ಗಣೇಶ್‌ ಅವರು ಸಚಿವ ಸ್ಥಾನ ಪಡೆಯುವುದಕ್ಕೆ ಅಡ್ಡಿಯಾಗಲಿವೆ ಎಂಬುದನ್ನು ಸಮುದಾಯದ ನಾಯಕರು ಒಪ್ಪಿಕೊಳ್ಳುತ್ತಾರೆ. ಆದರೆ, ಪಕ್ಷದ ಭವಿಷ್ಯದ ಹಿತದೃಷ್ಟಿಯಿಂದ ಅವರಿಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಮೂಲಕ ಸಮುದಾಯದಲ್ಲಿ ಮುಂಚೂಣಿ ನಾಯಕರನ್ನಾಗಿ ರೂಪಿಸುವ ಅನಿವಾರ್ಯತೆ ಇದೆ ಎಂದೂ ಹೇಳುತ್ತಾರೆ. ಆದರೆ, ಇದನ್ನು ಪಕ್ಷ ಹೇಗೆ ನೋಡುತ್ತದೆ ಎಂಬುದನ್ನು ಕಾಲ ನಿರ್ಧರಿಸಲಿದೆ.

Related Articles

Leave a Reply

Your email address will not be published. Required fields are marked *

Back to top button