[t4b-ticker]
ರಾಜ್ಯ

ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆಯಿಂದ ಜನರು ಬೇಸತ್ತಿದ್ದಾರೆ: ಮಾಜಿ ಸಿ ಎಂ ಸಿದ್ದರಾಮಯ್ಯ

“ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ, ನಿಷ್ಕ್ರಿಯತೆಯಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಜನರು ಬದಲಾವಣೆ ಬಯಸಿದ್ದಾರೆ.  ಬಿಜೆಪಿ ಸರ್ಕಾರವನ್ನು ಕೆತ್ತೆಸೆದು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ತರಲಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯ ಹಿಲ್ಲೆಯಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌ ಎಂ ಗಣೇಶ್‌ ಪ್ರಸಾದ್‌ ಅವರ ಪರವಾಗಿ ಸೋಮವಾರ ಪಟ್ಟಣದ ನೆಹರೂ ಸರ್ಕಲ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

“ನಾನು ಮುಖ್ಯಮಂತ್ರಿಯಾಗಿದ್ದಾಗ 15 ಲಕ್ಷ ಮನೆ ಕಟ್ಟಿಸಿದ್ದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಹೊಸ ಮನೆ ನಿರ್ಮಿಸಿಲ್ಲ. ನಾವು ಅಧಿಕಾರದಿಲ್ಲಿದ್ದಾಗ ಪ್ರತಿಯೊಬ್ಬರಿಗೆ 7 ಕೆ ಜಿ ನೀಡುತ್ತಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 4 ಕೆ ಜಿಗೆ ಇಳಿಸಿದ್ದಾರೆ. ಈ ಸಂಬಂಧ ವಿಧಾನಸಭೆಯಲ್ಲಿ ಪ್ರಶ್ನಿಸಿ, ಲಂಚ ಪಡೆಯುವುದನ್ನು ಕಡಿಮೆ ಮಾಡಿ ಎಂದು ಬಿಜೆಪಿಯವರಿಗೆ ಹೇಳಿದ್ದೇನೆ” ಎಂದರು.

“ಬೆಲೆ ನಿಯಂತ್ರಿಸುತ್ತೇವೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಆದರೆ, ಏನೂ ಬದಲಾಗಲಿಲ್ಲ. ದಿನಸಿ ಪದಾರ್ಥ, ರಸಗೊಬ್ಬರ, ಎಣ್ಣೆ ಎಲ್ಲವೂ ದುಬಾರಿಯಾಗಿವೆ. ಪ್ರಧಾನಿ ಮೋದಿ ಈಗ ಬೆಲೆ ಏರಿಕೆ, ರೈತರ ಸಮಸ್ಯೆ, ಭ್ರಷ್ಟಾಚಾರ, ನಿರುದ್ಯೋಗ, ಯುವಕರು, ಮಹಿಳೆಯರ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ. ಗುತ್ತಿಗೆದಾರರ ಸಂಘದವರು ಶೇ. 40ರಷ್ಟು ಲಂಚದ ಕುರಿತು ಪತ್ರ ಬರೆದಿದ್ದಾರೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡಿ, ಜನರ ದಾರಿ ತಪ್ಪಿಸುತ್ತಿದ್ದಾರೆ. ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಆದರೆ, ನಮ್ಮ ಆಡಳಿತದಲ್ಲಿ ಜಾತ್ಯತೀತವಾಗ, ಧರ್ಮಾತೀತವಾಗಿ ಎಲ್ಲ ಬಡವರಿಗೆ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ” ಎಂದರು.

“ನಮ್ಮ ಕಾಲದಲ್ಲಿ ಸೊಸೈಟಿಗಳಲ್ಲಿ ರೈತರು ಪಡೆದಿದ್ದ ಸಾಲದ ಪೈಕಿ 50 ಸಾವಿರ ರೂಪಾಯಿಗಳನ್ನು ಅಂದರೆ 8, 515 ಕೋಟಿ ರೈತರಿಗೆ ಸಾಲಮನ್ನಾ ಮಾಡಿದ್ದೇವೆ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯವರು ಬಡವರು, ರೈತರ ಸಾಲಮನ್ನಾ ಮಾಡುವುದಿಲ್ಲ. ಅದಾನಿ, ಅಂಬಾನಿಗಳ 12 ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ದೇಶ ಉಳಿಯುವುದಿಲ್ಲ. ಶ್ರೀಮಂತರ ಸಾಲಮನ್ನಾ ಮಾಡಿದರೆ ದೇಶ ಉಳಿಯುತ್ತದೆಯೇ?” ಎಂದು ಪ್ರಶ್ನಿಸಿದರು.

“ಜನರಿಗೆ ಅನುಕೂಲ ಮಾಡಿಕೊಡಲು 200 ಯೂನಿಟ್‌ ವಿದ್ಯುತ್‌, 10 ಕೆ ಜಿ ಅಕ್ಕಿ, ಮನೆಯ ಒಡತಿಗೆ 2 ಸಾವಿರ ರೂಪಾಯಿ, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000, ಡಿಪ್ಲೊಮಾ ಪಡೆದಿರುವವರಿಗೆ 1,500, ಮಹಿಳೆಯರಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ. ಇದರ ಜೊತೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇನ್ನೂ ಹಲವು ಭರವಸೆ ನೀಡಿದ್ದು, ಅವುಗಳನ್ನು ಈಡೇರಿಸಲು ಬದ್ಧವಾಗಿದ್ದೇವೆ” ಎಂದು ಹೇಳಿದರು.

“ಬಸವಣ್ಣನವರ ಜಯಂತಿಯಂದು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದೇನೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಇಡಬೇಕು ಎಂದು ಆದೇಶ ಮಾಡಿದ್ದೇನೆ ಎಂದರು. ಬಸವಾದಿಶರಣರ ಹಾದಿಯಲ್ಲಿ ನುಡಿದಂತೆ ನಡೆಯಲು ಬದ್ಧವಾಗಿದ್ದೇವೆ” ಎಂದು ಆಶ್ವಾಸನೆ ನೀಡಿದರು.

ಕಾರ್ಯಕ್ರಮದಲ್ಲಿ ಮಲ್ಲಯನಪುರ ಮತ್ತು ಕಲೀಗೌಡನ ಹಳ್ಳಿ ಗ್ರಾಮಸ್ಥರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಸಿದ್ದರಾಮಯ್ಯ ಅವರಿಗೆ ಟಗರು ಮತ್ತು ಕರಿ ಕಂಬಳಿಯನ್ನು ಉಡುಗೊರೆಯಾಗಿ ನೀಡಿದರು.

ಮಾಜಿ ಸಂಸದ ಹಾಗೂ ಕಾಂಗ್ರೆಸ್‌ ಮುಖಂಡರಾದ ಸಿದ್ದರಾಜು, ಎಚ್‌ ಎಸ್‌ ನಂಜಪ್ಪ, ಮುನಿರಾಜು, ಮಹೇಶ್‌, ಜಿ ಎಲ್‌ ರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button